ಅರುಣ್ ಯೋಗಿರಾಜ್ (ಜನನ 1983) ಮೈಸೂರಿನ ಒಬ್ಬ ಭಾರತೀಯ ಶಿಲ್ಪಿ. ಅವರು ಕೆತ್ತಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೂರ್ತಿಯನ್ನು ನವದೆಹಲಿಯ ಇಂಡಿಯಾ ಗೇಟ್ನ ಅಮರ್ ಜವಾನ್ ಜ್ಯೋತಿಯ ಹಿಂಭಾಗದಲ್ಲಿ ಸ್ಥಾಪಿಸಲಾಗಿದೆ. ಇವರು ಕೆತ್ತಿದ ಹಿಂದೂ ದೇವರು ರಾಮನ ಬಾಲ ರೂಪವಾದ ರಾಮ ಲಲ್ಲಾ ವಿಗ್ರಹವನ್ನು ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದೆ. == ಶಿಕ್ಷಣ ಮತ್ತು ಹಿನ್ನೆಲೆ == ಇವರು ಮೈಸೂರಿನ ಅಗ್ರಹಾರದವರು. ಕರ್ನಾಟಕ ರಾಜ್ಯದ ಮೈಸೂರು ನಗರದ ಐದು ತಲೆಮಾರಿನ ಶಿಲ್ಪಿಗಳ ಕುಟುಂಬದಿಂದ ಬಂದವರು. ಅರುಣ್ ಅವರ ತಂದೆ ಯೋಗಿರಾಜ್ ಮತ್ತು ತಾತ ಬಸವಣ್ಣ ಶಿಲ್ಪಿ ಕೂಡ ಪ್ರಸಿದ್ಧ ಶಿಲ್ಪಿಗಳು. 2008 ರಿಂದ ಪೂರ್ಣ ಶಿಲ್ಪಕಲೆಯಲ್ಲಿ ತೊಡಗಿಸಿಕೊಳ್ಳುವ ಮೊದಲು ಅರುಣ್ ತನ್ನ ಎಂಬಿಎ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು ಮತ್ತು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದರು ಅಕ್ಟೋಬರ್ 2021 ರಲ್ಲಿ ಅರುಣ್ ಸುಭಾಷ್ ಚಂದ್ರ ಬೋಸ್ ಪ್ರತಿಮೆಯನ್ನು ಕೆತ್ತುವ ಸಂದರ್ಭದಲ್ಲೇ ಅವರ ತಂದೆ ಯೋಗಿರಾಜ್ ಶಿಲ್ಪಿ ನಿಧನರಾದರು ಅರುಣ್ ಅವರಿಗೆ ಒಬ್ಬ ಸಹೋದರ ಮತ್ತು ಸಹೋದರಿ ಇದ್ದಾರೆ. ಅರುಣ್ ಅವರ ಪತ್ನಿ ವಿಜೇತಾ. ಶಿಲ್ಪಿಯೂ ಆಗಿರುವ ಅವರ ಸಹೋದರ ಸೂರ್ಯಪ್ರಕಾಶ್ ರೊಂದಿಗೆ ಅರುಣ್ ಕುಟುಂಬ ಮೈಸೂರಿನಲ್ಲಿ ವಾಸವಾಗಿದ್ದಾರೆ. == ವಿಶಿಷ್ಟ ಕಾರ್ಯಗಳು == ಅರುಣ್ ಯೋಗಿರಾಜ್ ಜನವರಿ ೨೨ ೨೦೨೪ರಲ್ಲಿ ಪ್ರತಿಷ್ಠಾಪನೆಗೊಂಡ ರಾಮಮಂದಿರದಲ್ಲಿನ ಬಾಲರಾಮನ ವಿಗ್ರವನ್ನು ಕೆತ್ತಿದ ಶಿಲ್ಪಿ. . 51 ಇಂಚು ಎತ್ತರದ ವಿಗ್ರಹವನ್ನು ಅಯೋಧ್ಯೆಯ ರಾಮಮಂದಿರದಲ್ಲಿ ಸ್ಥಾಪಿಸಲಾಗಿದೆ. ಅವರ ಇತರ ಶಿಲ್ಪಕೃತಿಗಳೆಂದರೆ, ಕೇದಾರನಾಥದಲ್ಲಿ ೧೨ ಅಡಿ ಎತ್ತರದ ೩-ಡಿ ಆದಿ ಶಂಕರಾಚಾರ್ಯರ ಪ್ರತಿಮೆ, ಮೈಸೂರು ಜಿಲ್ಲೆಯ ಚುಂಚನಕಟ್ಟೆಯಲ್ಲಿರುವ ೨೧ ಅಡಿ ಎತ್ತರದ ಹನುಮಾನ್ ಪ್ರತಿಮೆ, ಮೈಸೂರಿನಲ್ಲಿ ಬಿ. ಆರ್ ಅಂಬೇಡ್ಕರ್ ಅವರ 15 ಅಡಿ ಎತ್ತರದ ಶಿಲ್ಪ ಮೈಸೂರಿನಲ್ಲಿ ಸ್ವಾಮಿ ರಾಮಕೃಷ್ಣ ಪರಮಹಂಸರ ಬಿಳಿ ಅಮೃತಶಿಲಾ ಪ್ರತಿಮೆ, ನಂದಿಯ ಆರು ಅಡಿ ಏಕಶಿಲಾ ಪ್ರತಿಮೆ ಬನಶಂಕರಿ ದೇವಿಯ ಆರು ಅಡಿ ಎತ್ತರದ ಪ್ರತಿಮೆ. ೨೦೧೬ ರಲ್ಲಿ ಅನಾವರಣಗೊಂಡ ಜಯಚಾಮರಾಜೇಂದ್ರ ಒಡೆಯರ್ ಅವರ ೧೪.೫ ಅಡಿ ಎತ್ತರದ ಬಿಳಿ ಅಮೃತಶಿಲೆ ಪ್ರತಿಮೆ ಮೈಸೂರು ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 5 ಅಡಿ ಪ್ರತಿಮೆ == ಪ್ರಶಸ್ತಿಗಳು == ೨೦೧೪ ರಲ್ಲಿ ಭಾರತ ಸರ್ಕಾರದಿಂದ ದಕ್ಷಿಣ ವಲಯ ಯುವ ಕಲಾವಿದ ಪ್ರಶಸ್ತಿ ಮತ್ತು ಮೈಸೂರು ಜಿಲ್ಲಾಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ, ೨೦೨೧ ರಲ್ಲಿ ಕರ್ನಾಟಕ ಸರ್ಕಾರದ ಜಕಣಾಚಾರಿ ಪ್ರಶಸ್ತಿಯನ್ನು ಪಡೆದರು. ಶಿಲ್ಪಿಗಳ ಸಂಘದಿಂದ ಶಿಲ್ಪಾ ಕೌಸ್ತುಭ ಸನ್ಮಾನವನ್ನೂ ಪಡೆದಿದ್ದಾರೆ == ಉಲ್ಲೇಖಗಳು ==